ಇಂಡಿಯನ್ ಸೋಷಿಯಲ್ ರಿಫಾರ್ಮರ್

1890ರಲ್ಲಿ ಹಿಂದೂ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ತರುಣರು, ಹಿಂದೂ ಸಮಾಜದಲ್ಲಿ ಆಗಬೇಕಾದ ಕೆಲವು ಸುಧಾರಣೆಗಳನ್ನು ಪ್ರಚಾರ ಮಾಡಲೋಸುಗ, ಕಾಮಾಕ್ಷಿ ನಟರಾಜನ್ ಎಂಬುವರ ಸಂಪಾದಕತ್ವದಲ್ಲಿ ಈ ಇಂಗ್ಲಿಷ್ ವಾರಪತ್ರಿಕೆಯನ್ನು ಮದ್ರಾಸಿನಲ್ಲಿ ಪ್ರಾರಂಭಿಸಿದರು. 1892ರಲ್ಲಿ ನಟರಾಜನ್ ಬೊಂಬಾಯಿಗೆ ಹೋದ ಮೇಲೆ ಅಲ್ಲಿಂದ ಈ ಪತ್ರಿಕೆ ಪ್ರಕಟಗೊಂಡಿತು.

	ರಾನಡೆಯವರ ತತ್ತ್ವಗಳಿಗೆ ವಿರೋಧವಾಗಿ ಬರೆದದ್ದು, ದಿವಾನ್ ಬಹದ್ದೂರ್ ರಘುನಾಥರಾಯನ ಮೀನ-ಮೇಷ ನೀತಿಯನ್ನು ಖಂಡಿಸಿದ್ದು, ತೆಲಾಂಗ್ ಮತ್ತು ಮಧೋಳ್ಕರರ ರೀತಿನೀತಿಯನ್ನು ಟೀಕಿಸಿದ್ದು, ಬಾಲಗಂಗಾಧರ ತಿಲಕರ ಸಮಾಜ ಸೇವೆಯನ್ನು ಶ್ಲಾಘಿಸಿದ್ದು-ಇವೇ ಈ ಪತ್ರಿಕೆಯ ಬಿಚ್ಚು ಮನಸ್ಸಿನ ಧೋರಣೆಗೆ ಸಾಕ್ಷಿ. ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಸಮಾಜಸೇವೆಯನ್ನು ಮಾಡುವ ವಿಷಯದಲ್ಲಿ ಸ್ವತಂತ್ರನೀತಿಯನ್ನು ಪಾಲಿಸಿಕೊಂಡು ಶಾಸನಸಭೆಗಳಲ್ಲಿ ಮತ್ತು ಇತರ ಸೇವಾವರ್ಗಗಳಲ್ಲಿ ಜಾತೀಯ ಪ್ರಾತಿನಿಧ್ಯವನ್ನು ವಿರೋಧಿಸಿ ಧೈರ್ಯವಾಗಿ ಬರೆದ ಪತ್ರಿಕೆ ಆಗಿನ ಕಾಲಕ್ಕೆ ಇದೊಂದೇ. 1953ನೆಯ ಇಸವಿಯವರೆಗೂ ನಡೆದ ಈ ಪತ್ರಿಕೆಗೆ, ಭಾರತದಲ್ಲಿ ಸಮಾಜ ಸುಧಾರಣೆಗಾಗಿ ಸೇವೆ ಮಾಡಿದ ವಾರ ಪತ್ರಿಕೆಗಳಲ್ಲಿ ಅಗ್ರಸ್ಥಾನ ಸಲ್ಲಬೇಕು.  									      
(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ